ತಲೆ ಮತ್ತು ಕೊರಳಿನ ಶಸ್ತ್ರಚಿಕಿತ್ಸೆ -
	ತಲೆ ಮತ್ತು ಕೊರಳಿನಲ್ಲಿ ಕಂಡುಬರುವ ಅನೇಕ ರೋಗ ಮತ್ತು ಗಾಯಗಳನ್ನು ಔಷಧ ಚಿಕಿತ್ಸಾಕ್ರಮಗಳಿಂದ ಗುಣಪಡಿಸಲು ಸಾಧ್ಯವಾಗದಾಗ ಅನುಸರಿಸುವ ಚಿಕಿತ್ಸಾ ವಿಧಾನ. ಪ್ರಸಕ್ತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ವಿಸ್ತಿರಿಸಿದೆ. 

1 ಕೊರಳಿನಲ್ಲಿರುವ ಗ್ರಂಥಿಗಳ ಮತ್ತು ಇತರ ಅವಯವಗಳ ರೋಗಗಳಿಗಾಗಿ ನಡೆಸುವ ಶಸ್ತ್ರಚಿಕಿತ್ಸೆ. 

	2 ಬಾಯಿ ತುಟಿ ನಾಲಿಗೆಗಳಲ್ಲಿ ಕಂಡುಬರುವ ರೋಗ ಮತ್ತು ವಿಕಲತೆಗಳಿಗಾಗಿ ನಡೆಸುವ ಶಸ್ತ್ರಚಿಕಿತ್ಸೆ. 

	3 ತಲೆಯಲ್ಲಿ ಕಂಡುಬರುವ ರೋಗಗಳಿಗಾಗಿ ನಡೆಸುವ ಶಸ್ತ್ರಚಿಕಿತ್ಸೆ.

	ಪ್ರಸಕ್ತ ಲೇಖನದಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆ ಸೇರಿಲ್ಲ. ಅದನ್ನು ಪ್ರತ್ಯೇಕವಾಗಿಯೇ ಗಣಿಸುವುದು ವಾಡಿಕೆ. ಹಾಗೆಯೇ ಕಿವಿ ಮೂಗು ಗಂಟಲು ರೋಗಗಳ ಶಸ್ತ್ರಚಿಕಿತ್ಸೆ ಕೂಡ ಇಂಥ ವಿಶೇಷ ಶಸ್ತ್ರಕ್ರಿಯೆಗಳನ್ನು ಸಂಬಂಧಪಟ್ಟ ತಜ್ಞರು ಮಾಡುವುದೇ ವಾಡಿಕೆ. ಸಾರ್ವತ್ರಿಕ ಶಸ್ತ್ರಚಿಕಿತ್ಸಕ (ಜನರಲ್ ಸರ್ಜನ್) ಜರಗಿಸುವ ಕೆಲವು ಗಂಟಲು ವ್ಯಾಧಿಗಳ ಚಿಕಿತ್ಸೆಯನ್ನು ಮಾತ್ರ ಪ್ರಸಕ್ತ ಲೇಖನದಲ್ಲಿ ಸೇರಿಸಿದೆ. ಥೈರಾಯಿಡ್ ಗ್ರಂಥಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಈ ಪೈಕಿ ಮುಖ್ಯವಾದದ್ದು. ಹುಟ್ಟಿನಿಂದ ಮತ್ತು ಬೆಳೆವಣಿಗೆಯ ದೋಷಗಳಿಂದ ಉಂಟಾದ ವಿಕಲತೆಗಳು ಇವುಗಳಲ್ಲಿ ಸೇರಿವೆ: ಥೈರಾಯಿಡ್ ನಾಲಗೆಯ ಫಿಸ್ಟುಲ ಅಂದರೆ ಹೊರ ದ್ವಾರವಿರುವ ನಾಳ, ಥೈರಾಯಿಡ್ ನಾಲಗೆಯ ಪೊಳ್ಳು ಅಂಗ, ಎಡೆಬಿಟ್ಟ ಥೈರಾಯಿಡ್ ಗ್ರಂಥಿ (ಎಕ್ಟೊಪಿಕ್ ಥೈರಾಯಿಡ್). ಥೈರಾಯಿಡ್ ನಾಲಗೆಯ ಫಿಸ್ಟುಲ ಮತ್ತು ಪೊಳ್ಳು ಅಂಗ ಇವು ಭ್ರೂಣದ ಬೆಳೆವಣಿಗೆಯ ಕಾಲದ ದೋಷಗಳಿಂದ ಉಂಟಾಗುವುವು. ಇವನ್ನು ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು. ಎಡೆಬಿಟ್ಟ ಥೈರಾಯಿಡ್ ಗ್ರಂಥಿ ಸುತ್ರ ಮುತ್ತಲಿನ ಅಂಗಗಳನ್ನು ಒತ್ತುವಂತೆ ಬೆಳೆಯದಿದ್ದರೆ ಯಾವ ಶಸ್ತ್ರಕ್ರಿಯೆಯೂ ಬೇಕಾಗುವುದಿಲ್ಲ. ಹಾಗಿಲ್ಲದೆ ಅದು ಎದೆಯ ಗೂಡಿನೊಳಗೆ ಬೆಳೆಯುತ್ತ ಉಸಿರ್ನಾಳ ಮತ್ತು ಅನ್ನನಾಳದ ಮೇಲೆ ಒತ್ತಡವನ್ನು ಬೇರುತ್ತಿದ್ದರೆ ಅದನ್ನು ಶಸ್ತ್ರ ಕಾರ್ಯದಿಂದ ತೆಗೆದು ಹಾಕಬೇಕಾಗುತ್ತದೆ. 

	ಗಳಗಂಡೆ (ಗಾಯಿಟರ್) ಎಂಬುದು ಥೈರಾಯಿಡಿನ ಊತರಹಿತ ಗಾತ್ರವೃದ್ಧಿ. ಇದು ಹೇಗೆ ಬಂತೆಂಬುದನ್ನು ಅನುಸರಿಸಿ ಶಸ್ತ್ರ ಯಾ ಔಷಧ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ಹೆಣ್ಣ ಪ್ರಾಪ್ತ ವಯಸ್ಕಳಾಗುವಾಗ ಬರುವ ಗಳಗಂಡ. ಆ ಕಾಲದಲ್ಲಿ ಸ್ರವಿಸುವ ಹಾರ್ಮೋನುಗಳ ಪ್ರಭಾವದಿಂದ ತಲೆ ದೋರುತ್ತದೆ. ಕೆಲವು ತಿಂಗಳುಗಳ ಅನಂತರ ಅಥವಾ ಒಂದೆರಡು ವರ್ಷಗಳಲ್ಲಿ ವ್ಯಕಿ ಹಾರ್ಮೋನುಗಳಿಗೆ ಒಗ್ಗಿಕೊಂಡ ಮೇಲೆ ಇಂಥ ಗಳಗಂಡ ಕ್ರಮೇಣ ತಾನಾಗಿಯೇ ಕಡಿಮೆಯಾಗಿ ಬಿಡುತ್ತದೆ. ಇಲ್ಲಿ ಯಾವ ಚಿಕಿತ್ಸೆಯೂ ಬೇಕಾಗುವುದಿಲ್ಲ ಎಂಬುದು ಸ್ಪಷ್ಟ.. ಕುಡಿಯುವ ನೀರಿನಲ್ಲಿ ಅಥವಾ ಆಹಾರದಲ್ಲಿ ಅಯೊಡೀನ್ ಅಂಶ ಕಡಿಮೆಯಾಗಿ ಬರುವ ಸಾಮಾನ್ಯ ಗಳಗಂಡೆವನ್ನು ಯುಕ್ರ ಪ್ರಮಾಣದಲ್ಲಿ ಅಯೋಡೀನನ್ನು ಕೊಡುವುದರ ಮೂಲಕ ಚಿಕಿತ್ಸಿಸಬಹುದು. ಸಕಾಲದಲ್ಲಿ ಈ ಚಿಕಿತ್ಸೆಯನ್ನು ನೀಡದಿದ್ದರೆ ಗಳಗಂಡೆ ದೊಡ್ಡದಾಗಿ ಬೆಳೆದು ವಿರೂಪವನ್ನು ಉಂಟು ಮಾಡುವುದಲ್ಲದೆ ಅದರಿಂದ ಉಸಿರಾಟಕ್ಕೂ ತೊಂದರೆ ಆಗಬಹುದು. ಗಳಗಂಡೆ ಎಡಬಲ ಎರಡೂ ಕಡೆ ಹರಡಿರಬಹುದು ಇಲ್ಲವೇ ಒಂದು ಕಡೆ ಮಾತ್ರ ಇರಬಹುದು. ಕೆಲವು ವೇಳೆ ಅದು ದೊಡ್ಡದಾಗಿ ಬೆಳೆಯದೆ ಅದರ ಪ್ರಚೋದಕ ಪ್ರಭಾವ ಕಡಿಮೆಯಾಗಿ ರೋಗ ಕಾಣಿಸಿಕೊಳ್ಳಬಹುದು. ಈ ರೋಗದಲ್ಲಿ ರಕ್ತದ ಒತ್ತಡ, ಹೃದಯದ ಬಡಿತ, ಶರೀರದ ಉಷ್ಣತೆ ಮತ್ತು ಚಯಾಪಚಯ ಕ್ರಿಯೆಗಳ ಬೇಗ ಕಡಿಮೆ ಆಗÀುತ್ತವೆ. ಗಳಗಂಡ ಬೆಳೆದು ಉಸಿರಾಟಕ್ಕೆ ತೊಂದರೆಯಾಗುವಂತಾದರೆ ಅದನ್ನೂ ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾಗುತ್ತದೆ. ಗಾತ್ರ ವೃದ್ಧಿಯಿಂದ ವಿಕೃತಿ ಉಂಟಾದರೂ ಕುತ್ತಿಗೆಯ ಚಲನೆ ಕಷ್ಟವೆನಿಸುವಂತಿದ್ದರೂ ಅಷ್ಟೆ. ಥೈರಾಯಿಡ್ ಗ್ರಂಥಿಯಲ್ಲಿ ಉತ್ಪತ್ತಿ ಆಗುವ ಪ್ರಚೋದಕ ಅತಿರೇಕವಾದಾಗಲೂ ಗಳಗಂಡ ಕಾಣಿಸಿಕೊಳ್ಳಬಹುದು ಅಥವಾ ಕಾಣಿಸಿಕೊಳ್ಳದೇ ಹೋಗಬಹುದು. ಆಗ ಗ್ರಂಥಿಯ ಸ್ವಲ್ಪ ಭಾಗವನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕಿ ಪ್ರಚೋದಕರ ಪ್ರಭಾವವನ್ನೂ ಕಡಿಮೆ ಮಾಡಬಹುದು. ಥೈರಾಯಿಡ್ ಗ್ರಂಥಿಯನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕುವ ಮೊದಲು ಅದರ ಕಾರ್ಯ ಅತಿರೇಕವಾಗಿಯೇ ಇಲ್ಲವೇ ಎನ್ನುವುದನ್ನೂ ಪತ್ತೆಮಾಡಿಕೊಳ್ಳುವುದು ಅಗತ್ಯ. ಚಯಾಪಚಯ ಕ್ರಿಯೆ, ರಕ್ತದ ಒತ್ತಡ, ಹೃದಯದ ಬಡಿತ, ದೇಹದ ಶಾಖ, ರಕ್ತದಲ್ಲಿರುವ ಕೊಲೆಸ್ಟಿರಾಲಿನ ಅಂಶ ಮತ್ತು ರಕ್ತ ರಸದಲ್ಲಿರುವ ಅಯೊಡೀನ್ ಅಂಶ ಇವನ್ನು ಪರೀಕ್ಷಸುವುದರ ಮೂಲಕ ಇದನ್ನು ತಿಳಿದುಕೊಳ್ಳಬಹುದು. ಥೈರಾಯಿಡ್ ಗ್ರಂಥಿ ಏಡಿಗಂತಿ ರೋಗಕ್ಕೆ ತುತ್ತಾಗುವ ಸಂಭವವೂ ಇದೆ. ಈ ಗ್ರಂಥಿಯ ಏಡಿಗಂತಿ ರೋಗಗಳಲ್ಲಿ ಹಲವಾರÀು ಬಗೆಗಳಿವೆ. ಇದು ಪ್ರಾರಂಭದಲ್ಲೇ ತಿಳಿದರೆ ಶಸ್ತ್ರಕ್ರಿಯೆಯಿಂದ ಸ್ವಲ್ಪವಾದರೂ ಪ್ರಯೋಜನ ಪಡೆಯಬಹುದು. ಆಗ ಗ್ರಂಥಿಯನ್ನು ಶಸ್ತ್ರಕ್ರಿಯೆಯಿಂದ ಸಂಪೂರ್ಣವಾಗಿ ತೆಗೆಯಬೇಕಾಗುತ್ತದೆ ಮತ್ತು ಸುತ್ತ ಮುತ್ತಲಿನ ದುಗ್ಧರಸ ಗ್ರಂಥಿಗಳನ್ನೂ ತೆಗೆದುಹಾಕಬೇಕಾಗುತ್ತದೆ. ಅಲ್ಲದೆ ಶಸ್ತ್ರಕ್ರಿಯೆಯಾದ ಬಳಿಕ ಎಕ್ಸ್ ಕಿರಣ ಚಿಕಿತ್ಸೆಯನ್ನು ಅನುಸರಿಸುವುದೂ ಅಗತ್ಯವಾದೀತು. ಥೈರಾಯಿಡ್ ಗ್ರಂಥಿಯ ಹತ್ತಿರವೇ ಇರುವ ಎರಡು ಜೊತೆ ಪ್ಯಾರ ಥೈರಾಯಿಡ್ ಗ್ರಂಥಿಗಳಲ್ಲೂ ರೋಗ ಕಾಣಿಸಿಕೊಂಡರೆ ಅವನ್ನು ಸಹ ಶಸ್ತ್ರ ಚಿಕಿತ್ಸೆಯಿಂದ ತೆಗೆದುಹಾಕಬೇಕಾಗಬಹುದು. ಇದು 35-55 ವಯಸ್ಸಿನ ಹೆಂಗಸರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ಯಾರ ಥೈರಾಯಿಡ್ ಗ್ರಂಥಿ ದೇಹದಲ್ಲಿನ ಕ್ಯಾಲ್ಸಿಯಮ್ ಮತ್ತು ರಂಜಕದ ಸ್ವಾಭಾವಿಕ ಮಟ್ಟಗಳನ್ನು ಕಾಪಾಡುತ್ತದೆ. ಈ ಗ್ರಂಥಿಯಲ್ಲಿ ಗಂತಿಗಳು ಉಂಟಾಗಬಹುದು. ಹಾಗಾದಾಗ ಕ್ಯಾಲ್ಸಿಯಮ್ ಮತ್ತು ರಂಜಕದ ಅಂಶದಲ್ಲಿ ಏರುಪೇರಾಗುತ್ತದೆ. ಮೂತ್ರಕೃಚ್ಛ್ರ ದೇಹದ ಜಲಾಂಶ ತಗ್ಗುವಿಕೆ, ವಮನ, ಮಲಬದ್ಧತೆ, ದೇಹದ ಎಲುಬುಗಳ ವಿಕಾಸ ಇವು ಕೆಲವು ಲಕ್ಷಣಗಳು. ರೋಗದ ತೀವ್ರತೆಯನ್ನು ತಡೆಯಲು ಪ್ಯಾರ ಥೈರಾಯಿಡ್ ಗ್ರಂಥಿಯನ್ನೂ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬೇಕಾಗುತ್ತದೆ. ಆದರೆ ಈ ಗ್ರಂಥಿಗಳು ಜೀವಕ್ಕೆ ಅಗತ್ಯವಾದ್ದರಿಂದ ಅರೋಗ್ಯವಂತ ಗ್ರಂಥಿಗಳ ನಾಟಿಯ ಅಗತ್ಯ ಉಂಟು. ನಾಟಿಯಂಥ ಶಸ್ತ್ರಕ್ರಿಯೆಗೆ ಅನುಕೂಲವಿಲ್ಲದಿದ್ದರೆ ಥೈರಾಯಿಡ್ ಗ್ರಂಥಿಯ ಹಾರ್ಮೋನನ್ನು ಸೂಜಿಮದ್ದಾಗಿ ಜೀವನಪರ್ಯಂತ ಕೊಡುತ್ತಿರಬೇಕು. 

	ಕತ್ತಿನಲ್ಲಿ ಕಾಣಿಸಿಕೊಳ್ಳುವ ಗೆಡ್ಡೆಗಳು: ಕಿವಿರಿನ ಪೊಳ್ಳು ಅಂತ (ಬ್ರ್ಯಾಂಕಿಯಲ್ ಸಿಸ್ಟ್). ಇದು ಭ್ರೂಣ ಬೆಳೆವಣಿಗೆಯ ದೋಷದಿಂದ ಉಂಟಾಗುವ ಗೆಡ್ಡೆ. ಕೊರಳಿನ ಸ್ಟರ್ನೋಮ್ಯಾಸ್ಟಾಯ್ಡ್ ಸ್ನಾಯವಿನ ಮುಂಭಾಗದಲ್ಲಿ ಪೊಳ್ಳು ಉಬ್ಬಿನಂತಿರುತ್ತದೆ. ಇದರಿಂದ ಯಾವ ತೊಂದರೆ ಆಗದಿದ್ದರೂ ಯಾವಾಗಲಾದರೂ ಸೋಂಕು ತಗಲಿ ವ್ರಣವಾಗಬಹುದು. ಆದ್ದರಿಂದ ಉಬ್ಬು ಕಾಣಿಸಿಕೊಂಡ ಕೂಡಲೇ ಅದನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕುವುದು ಒಳ್ಳೆಯದು. 

	ಕಿವಿರಿನ ಫಿಸ್ಟುಲ: ಇದು ಆಗಾಗ್ಗೆ ಊದಿಕೊಂಡು ತೊಂದರೆ ಕೊಡುತ್ತದೆ. ಸೋಂಕು ತಗಲಿ ವ್ರಣವೂ ಆಗುತ್ತದೆ. ಶಸ್ತ್ರಕ್ರಿಯೆಯಿಂದ ಟೊಳ್ಳಿನ ಭಾಗವನ್ನು ಪೂರ್ಣವಾಗಿ ತೆಗೆದುಹಾಕಬೇಕು. 

	ಸ್ಥಳೀಯ ದುಗ್ಧರಸ ಗ್ರಂಥಿಗಳ ಉರಿಯೂತ : ಇದೊಂದು ಕೂರಾದ (ಅಕ್ಯೂಟ್) ಅನಾರೋಗ್ಯ ಸ್ಥಿತಿ. ಇದು ತೀವ್ರ ತರದ್ದಾಗಿರಬಹುದು ಅಥವಾ ಸಾಮಾನ್ಯ ತರದ್ದಾಗಿರಬಹುದು ಸೋಕು ಟಾನ್ಸಿಲ್ಲಿನಿಂದಲೂ ಗಂಟಲಿನಿಂದಲೂ ಹರಡುತ್ತದೆ. ದೊಡ್ಡವರಲ್ಲಿ ಹುಳುಕಹಲ್ಲು ಸೋಂಕಿನ ಆಕರವಾಗಿರುವುದು. ಸಾಮಾನ್ಯವಾಗಿ ಇದನ್ನು ಜೀವಿರೋಧಕ ಔಷಧಗಳಿಂದಲೇ ಚಿಕಿತ್ಸಿಸಬಹುದು. ಕೆಲವು ವಿಶೇಷ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ. ಅಂದರೆ ಶಸ್ತ್ರಕ್ರಿಯೆಯಿಂದ ಸೋಂಕಿನ ಆಕರವನ್ನು ತೆಗೆಯುವುದೇ ಅಲ್ಲದೆ ರೋಗಗ್ರಸ್ತ ದುಗ್ಧರಸ ಗ್ರಂಥಿಗಳನ್ನೂ ತೆಗೆದುಹಾಕಬೇಕು. ಧೀರ್ಘಕಾಲಿಕ ಕೊರಳಿನ ಗ್ರಂಥಿಯೂತ ಬೆಳೆಯುವ ಮಕ್ಕಳಲ್ಲಿ ಸಾಮಾನ್ಯ ಕ್ಷಯಾಣುವಿನಿಂದ ಉಂಟಾಗುವುದು ವಾಡಿಕೆ. ಇದು ದೊಡ್ಡವರಲ್ಲೂ ಚಿಕ್ಕವರಲ್ಲೂ ಗಂಡಸರಲ್ಲೂ ಹೆಂಗಸರಲ್ಲೂ ಏಕರೂಪವಾಗಿ ಕಾಣಿಸಿಕೊಳ್ಳುತ್ತದೆ. ಸೋಂಕು ಟಾನ್ಸಿಲ್ ಅಥವಾ ಗಂಟಲಿನಿಂದ ಹರಡಬಹುದು. ಇದನ್ನು ಕ್ಷಯರೋಗ ಜೀವಿರೋಧಕ ಔಷಧಗಳಿಂದ ಚಿಕಿತ್ಸೆ ಮಾಡಿ ಆರು ತಿಂಗಳವರೆಗೂ ಕಾದುನೋಡಿ ವಾಸಿಯಾಗಿದಿದ್ದರೆ ಇಲ್ಲವೆ ಗ್ರಂಥಿಗಳು ದೊಡ್ಡದಾಗಿ ವ್ರಣವಾಗಿ ಹುಣ್ಣಿನಂತಾದರೆ ಶಸ್ತ್ರಕ್ರಿಯೆ ಮಾಡಬೇಕಾಗುತ್ತದೆ. 

	ಕೊರಳಿನ ದುಗ್ಧರಸ ಗ್ರಂಥಿಗಳಲ್ಲಿ (ಲಿಂಫಾಟಿಕ್ ಗ್ಲ್ಯಾಂಡ್ಸ್) ಕಾಣಿಸಿಕೊಳ್ಳುವ ಏಡಿಗಂತಿ ರೋಗಗಳು ; ಇವುಗಳಲ್ಲಿ ಎರಡು ವಿಧ - ಪ್ರಾಥಮಿಕವಾಗಿ ಕೊರಳಿನಲ್ಲೇ ಕಾಣಿಸಿಕೊಳ್ಳುವವು. ಏಡಿಗಂತು ಬೇರೆ ಕಡೆ ಇದ್ದು ಅಲ್ಲಿಯ ಕೋಶಗಳು ದುಗ್ಧರಸನಾಳಗಳ ಮೂಲಕ ಸ್ಥಳಾಂತರಿಸುತ್ತ ಕೊರಳಿನಲ್ಲಿರುವ ದುಗ್ಧರಸ ಗ್ರಂಥಿಗಳಲ್ಲಿ ನೆಲೆಸಿ ಗೆಡ್ಡೆ ಉಂಟಾದಂಥವು. ದುಗ್ಧರಸ ಗ್ರಂಥಿಗಳ ಪ್ರಾಥಮಿಕ ಏಡಿಗಂತಿಗಳಲ್ಲಿ ಹಾಡ್ಜ್ ಕಿನ್ನನ ರೋಗ ಪ್ರಬುದ್ಧ ವಯಸ್ಕ ತರುಣರಲ್ಲಿ ಸಾಮಾನ್ಯ. ಕೊರಳಿನ ಒಂದು ಕಡೆ ಗ್ರಂಥಿಗಳು ವೃದ್ಧಿಯಾಗಿರುತ್ತವೆ. ಇದಕ್ಕೆ ಶಸ್ತ್ರಕ್ರಿಯೆಯಿಂದ ಯಾವ ಉಪಯೋಗವೂ ಆಗುವುದಿಲ್ಲ. ಕೇವಲ ರೋಗವನ್ನು ನಿರ್ಧರಿಸಿಕೊಳ್ಳಲು ಗ್ರಂಥಿಯ ಭಾಗವನ್ನು ಜೀವುಂಡಿಗೆ ಹಾಕಿ (ಬಯಾಪ್ಸಿ) ತೆಗೆದು ಪರೀಕ್ಷಿಸಲು ಶಸ್ತ್ರಕ್ರಿಯೆ ಅಗತ್ಯ. ಎಕ್ಸ್ ಕಿರಣ ಮತ್ತು ಔಷಧಗಳಿಂದ ಕೇವಲ ತಾತ್ಕಾಲಿಕ ಉಪಶಮನ ಪಡೆಯಬಹುದಷ್ಟೆ. 

	ಲಿಂಪೊ ಸಾರ್ಕೋಮ : ಇದು ಶೀಘ್ರವಾಗಿ ಹರಡಿಕೊಳ್ಳುವ ರೀತಿಯ ದುಗ್ಧರಸ ಗ್ರಂಥಿಯ ಏಡಿಗಂತಿ. ಶೀಘ್ರವಾಗಿ ಬೆಳೆದು ಸುತ್ತಮುತ್ತಲೆಲ್ಲ ವ್ಯಾಪಿಸುವುದು. ಶಸ್ತ್ರಕ್ರಿಯೆಯಿಂದ ಏನೂ ಉಪಯೋಗವಾಗುವುದಿಲ್ಲ. ಎಕ್ಸ್ ಕಿರಣ ಮತ್ತು ಔಷಧದಿಂದ ಲಭಿಸುವಷ್ಟು ಪ್ರಯೋಜನವೆಷ್ಟೂ ಅಷ್ಟೆ. ಬೇರೆ ಕಡೆಯ ಏಡಿಗಂತಿ ಕೋಶಗಳ ವಲಸೆಯಿಂದ ಉಂಟಾದ ಕೊರಳಿನ ದುಗ್ಧರಸ ಗ್ರಂಥಿಗಳ ಸ್ಥಿತಿಗೆ ಆಕರ ಏಡಿಗಂತಿಯ ಚಿಕಿತ್ಸೆ ಮುಖ್ಯ. ಕೆಲವು ವಿಶೇಷ ಸಂದಂರ್ಭಗಳಲ್ಲಿ ಆಕರ ಗಂತಿಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾಗುವುದಲ್ಲದೆ ಕೊರಳಿನ ದುಗ್ಧರಸ ಗ್ರಂಥಿಗಳನ್ನೂ ತೆಗೆಯಬೇಕಾಗುತ್ತದೆ. 

	ಕರೋಟಿಡ್ ಕಾಯದ ಗೆಡ್ಡೆ : ಇದು ಬಲು ಅಪರೂಪ. ವಯಸ್ಕರಾದ ಗಂಡಸರಲ್ಲೆ ವಿಶೇಷವಾಗಿ ಕಾಣಿಸಿಕೊಳ್ಳುತ್ತೆ. ಇದನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕುವುದೊಂದೇ ಮಾರ್ಗ. 

	ಜೊಲ್ಲುರಸ ಗ್ರಂಥಿಯ ರೋಗಗಳು : ಮೂರು ದೊಡ್ಡ ಜೊಲ್ಲುರಸ ಗ್ರಂಥಿಗಳು ಎಡಬಲ ಎರಡÀು ಕಡೆಯೂ ಇವೆ. ಕಿವಿ ಬದಿ ಇರುವುದು ಪೆರೋಟಿಡ್ ಗ್ರಂಥಿ. ದವಡೆಯ ಕೆಳಭಾಗದಲ್ಲಿರುವುದು ಸಬ್‍ಮಾಂಡಿಬ್ಯುಲರ್ ಗ್ರಂಥಿ. ನಾಲಗೆಯ ಕೆಳಭಾಗದಲ್ಲಿರುವುದು ಸಬ್‍ಲಿಂಗ್ವಲ್ ಗ್ರಂಥಿ. ಪೆರೋಟಿಡ್ ಗ್ರಂಥಿ ಸೋಂಕು ತಗಲಿ ಊದಿಕೊಳ್ಳುವುದು ಸಾಮಾನ್ಯ. ಇದಕ್ಕೆ ಗದ್ದಕಟ್ಟು ಎಂದು ಹೆಸರು. ಸೋಂಕು ತೀವ್ರ ರೀತಿಯದಾದರೆ ಕೆಲವು ವೇಳೆ ಗ್ರಂಥಿಯಲ್ಲಿ ಕೀವು ತುಂಬಿಕೊಂಡು ಬಲು ತೊಂದರೆ ಆಗುತ್ತದೆ. ಆಗ ಶಸ್ತ್ರಕ್ರಿಯೆಯಿಂದ ಕೀವನ್ನು ಹೊರತೆಗೆದು ನೋವನ್ನು ನಿವಾರಿಸಬೇಕು. ಜೊಲ್ಲುರಸ ಗ್ರಂಥಿಗಳಲ್ಲೂ ಏಡಿಗಂತಿ ಉಂಟಾಗುತ್ತದೆ. ಆಗ ಶಸ್ತ್ರಕ್ರಿಯೆಯಿಂದ ಪೂರ್ಣವಾಗಿ ಜೊಲ್ಲುರಸ ಗ್ರಂಥಿಯನ್ನು ತೆಗೆದುಹಾಕಬೇಕು. ಅಲ್ಲದೆ ಸುತ್ತಮುತ್ತಲಿನ ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕಬೇಕಾಗುವುದು ಅವಶ್ಯವೆನಿಸಬಹುದು. 

	ದನಿನಾಳ ಮತ್ತು ಕೆಳಗಂಟಲಲ್ಲಿ ಕಂಡು ಬರುವ ದುರ್ಮಾಂಸ ಮತ್ತು ಏಡಿಗಂತಿ ರೋಗಗಳು : ದನಿನಾಳಗಳಲ್ಲಿ ಕಂಡುಬರುವ ಮೃದಯಗಂಟು (ಪಾಲಿಪ್) ಮತ್ತು ಹಾಡುಗಾರರಲ್ಲಿ ಕಂಡುಬರುವ ಗಂತಿಗಳು ಧ್ವನಿ ಮತ್ತು ಶಾರೀರದಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತವೆ. ಬಲು ಎಚ್ಚರಿಕೆಯಿಂದ ಇವನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕಬೇಕು. ಇಲ್ಲದಿದ್ದರೆ ಧ್ವನಿ ಖಾಯಂ ಆಗಿ ಕೆಟ್ಟುಹೋದೀತು. ಚೂಚುಗಂತಿ (ಪ್ಯಾಪಿಲೋಮ) ರಕ್ತನಾಳಗಂತಿ (ಹೀಮ್ಯಾಂಜಿಯೋಮ) ಮತ್ತು ಮೆಲ್ಲೆಲುಬುಗಂತಿಗಳು (ಕಾಂಡ್ರೋಮ) ದನಿನಾಳದಲ್ಲಿ ಕಂಡುಬರÀುವ ಇತರ ಸಾಮಾನ್ಯ ಗಂತಿಗಳು. ಇವನ್ನು ಶಸ್ತ್ರಕ್ರಿಯೆಯಿಂದ ನಿವಾರಿಸಬೇಕು. ದನಿನಾಳಗಳಲ್ಲಿ ಕಂಡುಬರುವ ಏಡಿಗಂತಿ ರೋಗ ಮೊದಮೊದಲು ನಿಧಾನವಾಗಿ ಬೆಳೆಯುತ್ತ ಬಂದು ಮತ್ತೆ ಅತಿ ವೇಗವಾಗಿ ವ್ಯಾಪಿಸುತ್ತದೆ. ಧ್ವನಿ ವ್ಯತ್ಯಾಸವಾಗುವುದೊಂದೇ ಮೊದಲ ಮೊದಲ ಚಿಹ್ನೆಯಾಗಿ ಕಾಣಬರುವುದು. ಅರ್ಥವತ್ತಾದದ್ದೇ. ದನಿನಾಳದ ಭಾಗವನ್ನು ಜೀವುಂಡಿಗೆ ಹಾಕಿ ಕೊಯ್ದು ತೆಗೆದು ಪರೀಕ್ಷಿಸುವುದರ ಮೂಲಕ ಏಡಿಗಂತಿ ಸ್ಥಿತಿಯನ್ನು ಗೊತ್ತುಮಾಡಿಕೊಳ್ಳಬಹುದು. ಅನಂತರ ದನಿನಾಳದ ಭಾಗವನ್ನು ಪೂರ್ಣವಾಗಿ ತೆಗೆದುಹಾಕಿ ಅಕ್ಕಪಕ್ಕದ ದುಗ್ಧರಸ ಗ್ರಂಥಿಗಳೆಲ್ಲವನ್ನೂ ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾಗುತ್ತದೆ. ಸಹಜ ವಾಕ್ ಸಾಮಥ್ರ್ಯ ನಾಶವಾಗುವುದರಿಂದ ಅನ್ನನಾಳ ವಾಗ್ವಿಧಾನವನ್ನು ವ್ಯಕ್ತಿ ಕಲಿತುಕೊಳ್ಳಬೇಕಾಗುತ್ತದೆ (ಈಸೋಫೇಜೀಯಲ್ಸ ಸ್ಪೀಚ್) ರಕ್ತನಾಳಗಂತಿ ಮತ್ತು ದುಗ್ಧರಸನಾಳ ಗಂತಿಗಳು ಕೊರಳಿನಲ್ಲೂ ಮುಖದಲ್ಲೂ ಬಲು ಸಾಮಾನ್ಯವಾಗಿ ಕಂಡು ಬರುತ್ತವೆ. ಅಪಧಮನಿಯ ಪಸರಿಕೆ (ಅನ್ಯೂರೊಸಮ್) ಮತ್ತು ನರಗಳ ಗಂತಿಗಳ ಕಾಣಿಸಿಕೊಳ್ಳುವುದೂ ಉಂಟು. ಇವನ್ನೆಲ್ಲ ಶಸ್ತ್ರಕ್ರಿಯೆ ನಡೆಸಿ ಸುಧಾರಿಸಬಹುದು. 

	ಒಮ್ಮೊಮ್ಮೇ ಕೊರಳಿನ ಕಶೇರುಗಳಲ್ಲಿ ಪಕ್ಕೆಲುಬುಗಳಂಥ ಮೂಳೆ ಬೆಳೆದು ಅಲ್ಲಿನ ರಕ್ತನಾಳಗಳು ಮತ್ತು ನರಗಳನ್ನು ಒತ್ತಿಕ್ಕುವುದರಿಂದ ತೊಂದರೆ ಉಂಟಾಗಬಹುದು. ಆ ರೀತಿ ಬೆಳೆದ ಮೂಳೆಯ ಭಾಗಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬೇಕಾಗುತ್ತದೆ. ಕೆಲವು ವೇಳೆ ಕೆರೊಟಿಡ್ ಅಪಧಮನಿಗಳಲ್ಲಿ ಕಶೇರು ಅಪಧಮನಿಗಳಲ್ಲೂ ಅಸರಿಕೆಗಳು (ಅನ್ಯೂರಿಸಮ್) ಉಂಟಾಗಬಹುದು. ಆಗ ಅಂಥ ಭಾಗಗಳನ್ನೂ ಕತ್ತರಿಸಿ ತೆಗೆದುಹಾಕಿ ಅಪಧಮನಿಯ ಎರಡು ತುದಿಗಳನ್ನೂ ಸೇರಿಸಿ ಹೊಲಿದು ಶಸ್ತ್ರಚಿಕಿತ್ಸೆ ಮಾಡಬೇಕು. 

	ಗಂಟಲಿನ ಹೊರಚೀಲ (ಫೆರಿಂಜೀಯಲ್ ಪೌಚ್) : ಇದು ಗಂಟಲಿನ ಹಿಂಭಾಗದ ಗೋಡೆಯಲ್ಲಿ ಉಂಟಾಗಿ ಕತ್ತಿನ ಮಧ್ಯಭಾಗದಲ್ಲಿ ಉಬ್ಬಿರುತ್ತದೆ. ಇದರಿಂದ ಆಹಾರವನ್ನು ನುಂಗಲು ಅಡೆತಡೆ ಉಂಟಾಗುತ್ತದೆ. ಒತ್ತಿಕ್ಕಿದ ಅಥವಾ ಸೊಕ್ಕಿದ ಅನುಭವ ಉಂಟಾಗುತ್ತದೆ. ಶಸ್ತ್ರಕ್ರಿಯೆಯ ಮೂಲಕ ಈ ಹೊರಚೀಲವನ್ನು ಪೂರ್ಣವಾಗಿ ತೆಗೆದುಹಾಕಬೇಕು. ಯಾವುದೇ ಕಾರಣದಿಂದ ಉಸಿರಾಟಕ್ಕೆ ತೋಂದರೆ ಉಂಟಾದಾಗ ಅಂದರೆ ಗಂಟಲು ದನಿನಾಳ ಅಥವಾ ಅಂಗುಳದಲ್ಲಿ ತೊಂದರೆ ಉದ್ಭವಿಸಿ ಇಲ್ಲವೇ ಡಿಫ್ತೀರಿಯಾ ಮುಂತಾದ ಕಾಯಿಲೆಗಳಲ್ಲಿ ಗಂಟಲು ಊದಿಕೊಂಟು ಉಸಿರಾಡಲು ಕಷ್ಟವಾದಾಗ ಉಸಿರ್ನಾಳವನ್ನು ಶಸ್ತ್ರಕ್ರಿಯೆಯಿಂದ ಕೊಯ್ದು ತೂತು ಮಾಡಿ ಉಸಿರಾಟ ಸರಾಗವಾಗುವಂತೆ ಮಾಡಬೇಕು. ಇದು ಹಠಾತ್ ಅಗತ್ಯವಾಗಬಹುದಾದ ಶಸ್ತ್ರಕ್ರಿಯೆ. ಫುಪ್ಪುಸನವನು ಹಿರಿದು ಕಿರಿದು ಮಾಡುವ ಸ್ನಾಯುಗಳು ನಿಶ್ಚೇತನವಾಗಿದ್ದಾಗಲೂ ಉಸಿರ್ನಾಳವನ್ನು ಶಸ್ತ್ರಕ್ರಿಯೆಯಿಂದ ತೂತ ಮಾಡಿ ಅದರಲ್ಲಿ ಕೊಳವೆ ಇಟ್ಟು ಕೃತಕ ಉಸಿರಾಟಕ್ಕೆ ಸಹಾಯ ಮಾಡಬಹುದು. ಬಾರ್ಬಿಟ್ಯುರೇಟ್ ಮುಂತಾದ ಔಷಧಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದಾಗ ಇಂತ ಕ್ರಿಯೆಯ ಅಗತ್ಯ ಕಂಡುಬರಬಹುದು. 

	2 ಬಾಯಿ, ತುಟಿ, ನಾಲಗೆಗಳಲ್ಲಿ ಕಂಡುಬರುವ ರೋಗ ಮತ್ತು ವಿಕಲತೆಗಳಿಗಾಗಿ ನಡೆಸುವ ಶಸ್ತ್ರಚಿಕಿತ್ಸೆ : ಪೊಳ್ಳು ಗಂಟುಗಳು, ಚರ್ಮದ ಒಳಗಂತಿ (ಡರ್ಮಾಯ್ಡ್) ಮತ್ತು ಕಪ್ಪೆಬಾವು (ರ್ಯಾನ್ಯುಲ) - ಇವು ಸಾಮಾನ್ಯವಾಗಿ ಬಾಯಿಯೊಳಗೆ ಕಾಣುವ ಗಂತಿ ಮತ್ತÀು ಗೆಡ್ಡೆಗಳು. ಇವನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬಹುದು. ತುಟಿ, ನಾಲಗೆ ಮತ್ತು ಬಾಯಿಯೊಳಗೆ ಅನೇಕ ತರಹ ಏಡಿಗಂತಿಗಳು ಕಾಣಿಸಿಕೊಳ್ಳುತ್ತವೆ. ನಾಲಗೆಯ ಏಡಿಗಂತಿ ರೋಗಕ್ಕೆ ಶಸ್ತ್ರಕ್ರಿಯೆಯಿಂದ ಗಂತಿಯ ಭಾಗವನ್ನು ತೆಗೆದುಹಾಕಿ ಅದಕ್ಕೆ ಸೇರಿದ ಎಲ್ಲ ದುಗ್ಧರಸ ಗ್ರಂಥಿಗಳನ್ನೂ ತೆಗೆದುಹಾಕಿ ಎಕ್ಸ್‍ಕಿರಣ ಮತ್ತಿತರ ಚಿಕಿತ್ಸೆಯನ್ನು ನಡೆಸಬೇಕಾಗುತ್ತದೆ. ತುಟಿ ಮತ್ತು ಕೆನ್ನೆಯ ಒಳಗೆ ಕಾಣುವ ಏಡಿಗಂತಿ ರೋಗಕ್ಕೂ ಇದೇ ರೀತಿಯ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. 

	ಹುಟ್ಟಿದಾಗಲೇ ಭ್ರೂಣ ಬೆಳೆವಣಿಗೆಯ ಅಕ್ರಮಗಳಿಂದ ಕಂಡುಬರುವ ಕೆಲವು ದೋಷಗಳಲ್ಲಿ ಸೀಳಿದ ಅಂಗುಳ ಮತ್ತು ಸೀಳ್ದುಟಿ ಅಥವಾ ಮೊಲದುಟಿ ಮುಖ್ಯವಾದವು. ಕೆಲವು ವೇಳೆ ಕೇವಲ ಸೀಳ್ದುಟಿ ಮಾತ್ರ ಇರಬಹುದು. ಸೀಳ್ದುಟಿಯಲ್ಲಿ ಸೀಳು ಎಡ ಅಥವಾ ಬಲ ಯಾವುದಾದರೂ ಒಂದು ಇಲ್ಲವೇ ಎರಡು ಕಡೆಯೂ ಇರಬಹುದು. ಇನ್ನು ಕೆಲವು ವೇಳೆ ಸೀಳಿದ ಅಂಗುಳ ಮತ್ತು ಸೀಳ್ದುಟಿ ಎರಡೂ ಜೊತೆಗಿರಬಹುದು. ಮಗು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಸೀಳ್ದುಟಿ ಮತ್ತು ಸೀಳಿದ ಅಂಗುಳವನ್ನು ಶಸ್ತ್ರಕ್ರಿಯೆಯಿಂದ ಸರಿಪಡಿಸಬೇಕು. ಸೀಳುಗಳನ್ನು ಸೇರಿಸಿ ಹೊಲಿದು ವಿಕಾರವಾಗದಂತೆ ಸರಿಪಡಿಸಿ ಶಸ್ತ್ರಕ್ರಿಯೆ ನಡೆಸಬೇಕು. 

	3 ತಲೆಯಲ್ಲಿ ಕಂಡು ಬರುವ ರೋಗಗಳ ಶಸ್ತ್ರಚಿಕಿತ್ಸೆ, ಜಿಡ್ಡು ಸುರಿಸುವ ಪೊಳ್ಳಗಂಟು (ಸೆಬೇಶಿಯಸ್ ಸಿಸ್ಟ್): ಇದು ತಲೆಯ ಅನೇಕ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಯಾವ ತೊಂದರೆಯನ್ನೂ ಉಂಟುಮಾಡುವುದಿಲ್ಲ. ಆದರೆ ವಿರೂಪಗೊಳಿಸಬಹುದು. ಅಲ್ಲದೆ ಏನಾದರೂ ಏಟು ತಗಲಿ ವ್ರಣವಾದರೆ ಇದರಿಂದ ತೊಂದರೆ ಆಗಬಹುದು. ಆದ್ದರಿಂದ ಪೊಳ್ಳುಗಂಟನ್ನು ಸಂಪೂರ್ಣವಾಗಿ ಶಸ್ತ್ರಕ್ರಿಯೆಯಿಂದ ತೆಗೆದುಹಾಕÀಬೇಕು. ಹಾಗೆ ಸಂಪೂರ್ಣವಾಗಿ ತೆಗೆದುಹಾಕದೆ ಹೋದರೆ ಪುನಃ ಪುನಃ ಮರುಕಳಿಸುತ್ತಿರುವುದು ಸರ್ವೇಸಾಮಾನ್ಯ. ವಾಹನಗಳ ಅಪಘಾತಗಳಲ್ಲಿ ಮತ್ತು ಇನ್ನಿತರ ಆಕಸ್ಮಿಕಗಳಲ್ಲಿ ಅನೇಕ ವೇಳೆ ತಲೆಗೆ ಏಟು ಬೀಳುವುದು ತಿಳಿದದ್ದೇ. ಅಂಥ ವೇಳೆ ಬುರುಡೆಯ ಮೂಳೆಗೆ ಏಟು ಬಿದ್ದು ಮುರಿದು ಚೂರು ಬುರುಡೆಯೊಳಕ್ಕೆ ಅದುಮಲ್ಪಟ್ಟು ಮಿದುಳಿಗೆ ಅಪಾಯವನ್ನು ಉಂಟುಮಾಡಬಹುದು. ಆಗ ಒಡನೆ ಅದುಮಲ್ಪಟ್ಟ ಮೂಳೆಯೂ ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ಮೇಲಕ್ಕೆತ್ತಿ ಮಿದುಳಿನ ಮೇಲೆ ಬಿದ್ದಿರುವ ಒತ್ತಡವನ್ನು ಕಡಿಮೆ ಮಾಡಬೇಕು. ಇದೇ ಸಂದರ್ಭಗಳಲ್ಲಿ ಬರುಡೆಯೊಳಗಿನ ರಕ್ತನಾಳಗಳು ಅದರಲ್ಲೂ ಅಪಧಮನಿಗಳು ಬುರುಡೆಗೆ ಏಟು ಬಿದ್ದಾಗ ಹರಿದು ಬುರುಡೆಯೊಳಗೆ ಅತೀವ ರಕ್ತಸ್ರಾವ ಆಗಬಹುದು. ಆಗ ಅಂಥ ಜಾಗದಲ್ಲಿ ಶಸ್ತ್ರಕ್ರಿಯೆಯ ಮೂಲಕ ಬರುಡೆಯನ್ನು ತೂತು ಮಾಡಿ ಹರಿದುಹೋದ ಅಪಧಮನಿಗಳನ್ನು ಹಿಡಿದು ಕಟ್ಟಬೇಕು ಅಥವಾ ಹೆಚ್ಚಾದ ಒತ್ತಡವನ್ನು ರಕ್ತಸ್ರಾವ ಮಾಡಿಸಿ ಕಡಿಮೆ ಮಾಡಬೇಕು. ಆಕಸ್ಮಿಕಗಳಲ್ಲಿ ಮುಖದ ಯಾವುದೇ ಭಾಗ ವಿರೂಪಗೊಂಡಾಗಲೂ ಕೊರಳು ಮತ್ತು ಮುಖದ ಭಾಗಗಳು ಸುಟ್ಟಗಾಯಗಳಿಂದ ವಿರೂಪಗೊಂಡಾಗಲೂ ಸುರೂಪಿಕ ಶಸ್ತ್ರಕ್ರಿಯೆಯಿಂದ ವಿರೂಪಗೊಂಡ ಭಾಗಗಳನ್ನು ಸುರೂಪಗೊಳಿಸಬಹುದು. ಇದಕ್ಕಾಗಿ ಚರ್ಮ ಅಥವಾ ಇನ್ನಿತರ ಭಾಗಗಳನ್ನು ನಾಟಿ ಹಾಕುವಂಥ ಶಸ್ತ್ರಕ್ರಿಯೆಯನ್ನು ಮಾಡಬೇಕಾಗಬಹುದು.
(ಆರ್.ಎನ್.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ